ತೆಂಗು
ಅತ್ಯಂತ ಪ್ರಾಚೀನವಾದ ಹಾಗೂ ಬಲು ಉಪಯುಕ್ತವಾದ ಉಷ್ಣವಲಯದ ಬೆಳೆ. (ಕೋಕೋನಟ್ ಪಾಮ್). ಆ್ಯರಿಕೇಸೀ (ಪಾಮೀ) ಕುಟುಂಬಕ್ಕೆ ಸೇರಿದೆ. ಕೋಕೋಸ್ ನ್ಯೂಸಿಫರ ಇದರ ಶಾಸ್ತ್ರೀಯ ಹೆಸರು. ಭಾರತ, ಮಲಯ, ಶ್ರೀಲಂಕಾ, ವೆಸ್ಟ್ ಇಂಡೀಸ್, ಪೆಸಿಫಿಕ್ ವಸಾಹತು, ಮತ್ತು ಆಗ್ನೇಯ ಏಷ್ಯಗಳಲ್ಲಿ ಹೆಚ್ಚಾಗಿ ಬೆಳೆಯುವುದು. ತೆಂಗಿನ ಮೂಲ ಸ್ಥಳ ಪ್ರಾಯಶಃ ಮಲಯ ಅಥವಾ ಇಂಡೋನೇಷ್ಯ ಇರಬಹುದೆಂದು ಭಾವಿಸಲಾಗಿದೆ. ಅಲ್ಲಿಂದ ಇತರ ದೇಶಗಳಿಗೆ ಇದು ಹರಡಿರಬಹುದು. ವೇದ, ಪುರಾಣಗಳಲ್ಲೂ ತೆಂಗಿನ ಉಲ್ಲೇಖವಿರುವುದರಿಂದ ಭಾರತದಲ್ಲಿ ತೆಂಗು ಪುರಾತನ ಕಾಲದಿಂದಲೂ ಪ್ರಸಿದ್ದವಾಗಿದೆಯೆಂದು ತಿಳಿಯಲಾಗಿದೆ.

ತೆಂಗಿನ ಮರದ ಪ್ರತಿಯೊಂದು ಭಾಗವೂ ಒಂದಿಲ್ಲೊಂದು ರೀತಿಯಲ್ಲಿ ಉಪಯೋಗಕ್ಕೆ ಬರುವುದು. ಆಹಾರ, ಪಾನೀಯ, ವಸತಿ, ಮತ್ತು ಅನೇಕ ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥಗಳನ್ನು ಇದು ಒದಗಿಸುವುದು. ತೆಂಗಿನಕಾಯಿ, ಎಳನೀರು, ಕೊಬ್ಬರಿ, ತೆಂಗಿನ ಎಣ್ಣೆ, (ಕೊಬ್ಬರಿ ಎಣ್ಣೆ) ಮೊದಲಾದ ಆಹಾರ ಹಾಗೂ ಪಾನೀಯಗಳನ್ನು ನೀಡುವುದು. ತೆಂಗಿನ ಎಣ್ಣೆಯನ್ನು ಸಾಬೂನು ಮೊದಲಾದ ಕೈಗಾರಿಕೆಗಳಲ್ಲಿ ಬಳಸಲಾಗುವುದು. ಎಣ್ಣೆ ತೆಗೆದ ಅನಂತರ ಸಿಗುವ ಹಿಂಡಿಯನ್ನು ಜಾನುವಾರುಗಳಿಗೆ ಉತ್ತಮ ಮೇವು. ತೆಂಗಿನ ಕಾಯಿಯ ತಿರುಳನ್ನು ಯಂತ್ರ ಸಹಾಯದಿಂದ ತುರಿದು, ಒಣಗಿಸಿ ಸಂಸ್ಕರಿಸಿ, ಚಾಕಲೇಟ್, ಬಿಸ್ಕತ್, ಮೊದಲಾದವುಗಳಲ್ಲಿ ಉಪಯೋಗಿಸಲಾಗುವುದು. ತೆಂಗಿನ ಹೂ ಅರಳುವ ಮೊದಲು ಹೂ ದಿಂಡಿನಿಂದ ನೀರಾ, ಹೆಂಡಗಳನ್ನು ಇಳಿಸಲಾಗುವುದಲ್ಲದೆ ಇದರ ರಸದಿಂದ ಬೆಲ್ಲ ತಯಾರಿಸಬಹುದು. ತೆಂಗಿನ ಮರದಿಂದ ತೊಲೆ, ಕಂಬ, ರೀಪು, ಪಕ್ಕಾಸಿ, ಮೊದಲಾದ ಮನೆ ಕಟ್ಟುವ ಸಲಕರಣೆಗಳನ್ನೂ ತೆಂಗಿನ ಗರಿಯಿಂದ ಮನೆಚಾವಣಿ ಹೊದಿಕೆ, ಚಾಪೆ, ಬುಟ್ಟಿ ಮುತಾದವನ್ನೂ ತೆಂಗಿನ ಗರಿಗಳ ಮಧ್ಯೆಯಿರುವ ಕಡ್ಡಿಯಿಂದ ಪೊರಕೆಯನ್ನೂ ತಯಾರಿಸಬಹುದು. ತೆಂಗಿನ ಚಿಪ್ಪನ್ನು ಕುಶಲ ಕೈಗಾರಿಕೆಯಲ್ಲಿಯೂ, ಪ್ಲಾಸ್ಟಿಕ್ ಕೈಗಾರಿಕೆ ಮತ್ತು ಇದ್ದಲು ತಯಾರಿಕೆಯಲ್ಲಿಯೂ ಉಪಯೋಗಿಸಲಾಗುತ್ತಿದೆ. ತೆಂಗಿನ ನಾರಿನಿಂದ ಜಮಖಾನೆ, ಚಾಪೆ, ಕಾಲೊರಸು, ಹುರಿ, ಹಗ್ಗ, ಮೊದಲಾದ ಅನೇಕ ವಸ್ತುಗಳನ್ನು ತಯಾರಿಸುವರು. (ನೋಡಿ- ತೆಂಗಿನ-ನಾರಿನ-ಕೈಗಾರಿಕೆ). ಹೀಗೆ ತೆಂಗಿನ ಮರದ ಪ್ರತಿಯೊಂದು ಭಾಗವೂ ಉಪಯುಕ್ತವಾಗಿದ್ದು ತೆಂಗಿನ ಬೇಸಾಯ, ಕೈಗಾರಿಕೆ ಮತ್ತು  ವ್ಯಾಪಾರಗಳು ಲಕ್ಷಾಂತರ ಜನರಿಗೆ ಜೀವನಾಧಾರವಾಗಿರುವುದರಿಂದ ತೆಂಗನ್ನು ಕಲ್ಪವೃಕ್ಷವೆಂದು ಕರೆಯುವುದುಂಟು.

ಪ್ರಪಂಚದಲ್ಲಿ ಸುಮಾರು 6.6 ದಶಲಕ್ಷ ಹೆಕ್ಟೇರ್‍ಗಳ ವಿಸ್ತೀರ್ಣದಲ್ಲಿ ತೆಂಗನ್ನು ಬೆಳೆಸಲಾಗುತ್ತಿದ್ದು 27.379 ದಶಲಕ್ಷ ತೆಂಗಿನಕಾಯಿಗಳನ್ನು ಉತ್ಪಾದಿಸಲಾಗುತ್ತಿದೆಯೆಂದು ಅಂದಾಜು ಮಾಡಲಾಗಿದೆ.

ಪ್ರಪಂಚದಲ್ಲಿ ತೆಂಗಿನ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆ ವಿವರ
ದೇಶ	ವಿಸ್ತೀರ್ಣ	ಉತ್ಪಾದನೆ
	(000 ಹೆಕ್ಟೇರುಗಳಲ್ಲಿ)	(ದಶಲಕ್ಷ ಕಾಯಿಗಳಲ್ಲಿ)
1.  ಫಿಲಿಪೀನ್ಸ್	1800.4	7412.4
2.  ಇಂಡೋನೇಷ್ಯ	1735.0	5441.0
3.  ಭಾರತ	1022.0	5779.0
4.  ಶ್ರೀಲಂಕಾ	485.6	2601.0
5.  ತೈಲ್ಯಾಂಡ್	275.2	869.3
6.  ಮಲಯ	221.7	1160.4
7.  ನ್ಯೂಗಿನಿ ಮತ್ತು ಪಾಪುವ ವಸಾಹತು	251.0	773.0
8.  ಫಿಜಿ	64.7	191.3
9.  ಟ್ರಿನಿಡಾಡ್	16.2	152.0
10. ಇತರೆ	700.0	3000.0
     	—————	——————
  ಪ್ರಪಂಚದ ಒಟ್ಟು . . .	6571.8	27.379.4
	—————	——————

ಪ್ರಪಂಚದಲ್ಲಿ ತೆಂಗಿನ ಬೆಳೆಯ ವಿಸ್ತೀರ್ಣ ಹಾಗೂ ಉತ್ಪಾದನೆಯಲ್ಲಿ ಫಿಲಿಪೀನ್ಸ್‍ಗೆ ಮೊದಲ ಸ್ಥಾನ. ವಿಸ್ತೀರ್ಣದಲ್ಲಿ ಇಂಡೋನೇಷ್ಯ ಎರಡನೆಯ ಮತ್ತು ಭಾರತ ಮೂರನೆಯ ಸ್ಥಾನ ಪಡೆದಿವೆ. ಆದರೆ ಉತ್ಪಾದನೆಯಲ್ಲಿ ಭಾರತಕ್ಕೆ ಎರಡನೆಯ ಸ್ಥಾನವೂ ಇಂಡೋನೇಷ್ಯಕ್ಕೆ ಮೂರನೆಯ ಸ್ಥಾನವೂ ಲಭ್ಯವಾಗಿವೆ.

ತೆಂಗಿನ 	ಉತ್ಪಾದನೆಯಲ್ಲಿ ಭಾರತ ಸ್ವಯಂಪರಿಪೂರ್ಣತೆ ಪಡೆದಿಲ್ಲವಾದ್ದರಿಂದ ಸ್ವಲ್ಪಭಾಗ ಕೊಬ್ಬರಿಯನ್ನು ಶ್ರೀಲಂಕಾ, ಮಲಯ ಮೊದಲಾದ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ತೆಂಗಿನ ಉತ್ಪಾದನೆ ಹೆಚ್ಚಿಸಲು ಅನೇಕ ಅಭಿವೃದ್ದಿ ಯೋಜನೆಗಳು ಕಾರ್ಯಗತವಾಗಿವೆ. ತೆಂಗಿನ ನಾರು ಮತ್ತು ಅದರ ಸಿದ್ಧವಸ್ತುಗಳ ರಫ್ತಿನಿಂದ ಸುಮಾರು 15 ಕೋಟಿ ರೂಪಾಯಿ ಮೌಲ್ಯದ ವಿದೇಶೀ ವಿನಿಮಯ ಸಂಪಾದನೆಯಾಗುತ್ತಿದೆ.

ತೆಂಗನ್ನು ತೇವಪೂರಿತ ಉಷ್ಣವಲಯದ ಹವಾಗುಣವಿರುವ ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆಸಬಹುದು. 220ಅ ಯಿಂದ 340ಅ ಉಷ್ಣತೆಯಿರುವ ಸ್ಥಳಗಳಲ್ಲೂ ಸಮುದ್ರಮಟ್ಟದಿಂದ ಸುಮಾರು 1,000 m ಎತ್ತರದ ಪ್ರದೇಶಗಳಲ್ಲೂ ಚೆನ್ನಾಗಿ ಬೆಳಸಬಹುದು. ಸರಾಸರಿ 100-300ಛಿm. ಮಳೆ ಬೀಳುವ ಪ್ರದೇಶ ಅನುಕೂಲ. ಕಡಿಮೆ ಮಳೆ ಅಂದರೆ ಸುಮಾರು 50-60ಛಿm. ಮಳೆ ಬೀಳುವ ಪ್ರದೇಶಗಳಲ್ಲಿ ಸಹ ನೀರಾವರಿ ಆಶ್ರಯವಿದ್ದರೆ ತೆಂಗನ್ನು  ಬೆಳಸಬಹುದು. ತೆಂಗನ್ನು ಕೆಂಪುಮಣ್ಣು, ಜಂಬಿಟ್ಟಿಗೆ ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣು ಅಥವಾ ಕಪ್ಪು ಗೋಡು ಮಣ್ಣು, ಕರಾವಳಿಯ ಮರಳು ಭೂಮಿಗಳಲ್ಲಿ ಬೆಳೆಸಬಹುದು.  ಆದರೆ ಜೌಗುನೆಲ, ಕಲ್ಲುಭೂಮಿ, ಹವಾಮಾನಗಳ ತೀವ್ರ ವೈಪರೀತ್ಯ ತೆಂಗಿಗೆ ಯೋಗ್ಯವಲ್ಲ.  ತೆಂಗು ನೆಡುವ ಭೂಮಿಯಲ್ಲಿ ಒಳಗಡೆ ಕಲ್ಲು ಅಥವಾ ಗಟ್ಟಿ ನೆಲ ಇರಬಾರದು.  ಸುಮಾರು 2m.ಗಳಷ್ಟಾದರೂ ಒಳ್ಳೆ ಮಣ್ಣಿರಬೇಕು.  ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಭಾರತದಲ್ಲಿ ತೆಂಗಿನ ಬೆಳೆಯ ವಿಸ್ತಿರ್ಣ ಮತ್ತು ಉತ್ಪಾದನೆ
ರಾಜ್ಯ 		 			ವಿಸ್ತಿರ್ಣ 		ಉತ್ಪಾದನೆ
					(000 ಹೆಕ್ಟೇರುಗಳಲ್ಲಿ)  (ದಶಲಕ್ಷ ಕಾಯಿಗಳಲ್ಲಿ)
1 ಕೇರಳ				707.8			3956.1
2 ಕರ್ನಾಟಕ				116.6			 484.7
3 ತಮಿಳುನಾಡು				 98.0			 873.2
4 ಆಂಧ್ರಪ್ರದೇಶ				 36.6			 205.7
5 ಒರಿಸ್ಸ					 10.3 			  38.5
6 ಪಶ್ಚಿಮ ಬಂಗಾಳ			  6.7			  22.0
7 ಮಹಾರಾಷ್ಟ್ರ				  9.3			  46.3
8 ಅಸ್ಸಾಮ್				  3.7			  11.4
9 ಗೋವ, ಡಯು ಮತ್ತು ಡಾಮನ್	 19.7			  70.0
10 ಅಂಡಮಾನ್ ಮತ್ತು ನಿಕೋಬಾರ್ 	  8.7			  37.8
  ದ್ವೀಪಗಳು
11 ಲಕ್ಷದ್ವೀಪ, ಮಿನಿಕಾಯ್  		2.7			  18.2
  ಮತ್ತು ಅಮಿನ್‍ಡಿವಿ		
12 ಪಾಂಡಿಚೇರಿ				1.5			  14.8
13 ತ್ರಿಪುರ				0.3			   0.3
			ಒಟ್ಟು	   1022.0			5779.0

				
ಸಸ್ಯಲಕ್ಷಣ : ತೆಂಗು 70 - 80 ವರ್ಷಗಳ ಕಾಲ ಬದುಕಿ ಫಲಕೊಡುವ ಒಂಟಿ ಕಾಂಡದ ವೃಕ್ಷ.  ಮರದ ಬುಡದಲ್ಲಿ ಭದ್ರವಾದ ಬೇರುಗಳುಂಟು.  ಕಾಂಡ ಕೊಂಬೆರಹಿತವಾಗಿದ್ದು ಬಿದ್ದ ಗರಿಗಳ ಗುರುತಿನಿಂದ ಕೂಡಿ ಸ್ತಂಭಾಕೃತಿಯಿಂದ 20 - 25 m. ಗೂ ಹೆಚ್ಚು ಎತ್ತರವಾಗಿ ಬೆಳೆಯುವುದು.  ಮರದ ತುದಿಯಲ್ಲಿ ದಟ್ಟವಾಗಿ ಬೆಳೆದ ಬೇರೆ ಬೇರೆ ವಯಸ್ಸಿನ ಸುಮಾರು 30 - 40 ಗರಿಗಳಿರುತ್ತವೆ.

ಗಿಡದ ತುದಿಯ ಕೇಂದ್ರದಲ್ಲಿ ಸುಳಿಯಿದೆ.  ಗರಿಗಳ ಉದ್ದ ಸುಮಾರು 4-6m. ಮಧ್ಯದ ದಿಂಡಿನ ಎರಡು ಕಡೆಯೂ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುವ 200 ರಿಂದ 300 ಕಿರುಪತ್ರಗಳುಂಟು. ಒಂದು ಸಿಂಗಾರದಲ್ಲಿ (ಹೊಂಬಾಳೆಯಲ್ಲಿ) ಗಂಡು ಮತ್ತು ಹೆಣ್ಣು ಹೂಗಳಿರುತ್ತವೆ.  ಪ್ರತಿ ಎಲೆಯ ಕಂಕುಳಲ್ಲೂ ಒಂದು ಸಿಂಗಾರ ಬರುವುದು.  ಸಿಂಗಾರ ಉದ್ದನೆಯ ಕವಚದಿಂದ ಮುಚ್ಚಿರುವುದು.  ಕವಚ ಒಡೆದು ಸಿಂಗಾರ ಅರಳಿದಾಗ ಅದರ ನಡುದಿಂಡಿನ ಎರಡು ಭಾಗದಲ್ಲೂ ಜೋಡಣೆಗೊಂಡಿರುವ ಉಪಕವಲುಗಳ ಮೇಲೆ ಹೂಗಳು ಗೋಚರವಾಗುವುವು. ತುದಿಯಲ್ಲಿ ಗಂಡು ಹೂಗಳೂ, ಬುಡದಲ್ಲಿ ಹೆಣ್ಣು ಹೂಗಳೂ ಇವೆ. ಮೊದಲು ಗಂಡು ಹೂಗಳು ಅನಂತರ ಹೆಣ್ಣು ಹೂಗಳು ಅರಳುತ್ತವೆ.  ಉತ್ತಮವಾಗಿ ಕೃಷಿಮಾಡಿದ ಮರದಿಂದ 100 - 200 ಕಾಯಿಗಳು ದೊರೆಯುವುವು.  ಕಾಯಿಗಳ ಬಣ್ಣ ಹಳದಿ, ಕೆಂಪು, ಕಿತ್ತಳೆ, ಕಂದು, ಹಸಿರು - ಹೀಗೆ ವೈವಿಧ್ಯಮಯ.  ಕಾಯಿ ಡ್ರೂಪ್ ಮಾದರಿಯದು.

ತೆಂಗಿನ ಬಗೆಗಳು : ತೆಂಗಿನಲ್ಲಿ ಎರಡು ನಿರ್ದಿಷ್ಟ ಬಗೆಗಳಿವೆ.  ಒಂದು ಎತ್ತರ ಬೆಳೆಯುವಂಥದಾದರೆ ಇನ್ನೊಂದು ಗಿಡ್ಡ ಬೆಳೆಯುವ ಬಗೆ.  ಅನ್ಯಪರಾಗ ಸ್ಪರ್ಶದ ಪರಿಣಾಮವಾಗಿ ಮರದ ಎತ್ತರ, ಕಾಯಿಯ ಗಾತ್ರ, ಆಕಾರ,ಬಣ್ಣ, ಇಳುವರಿ, ಕೊಬ್ಬರಿಯ ಪ್ರಮಾಣದಲ್ಲಿ ವ್ಯತ್ಯಾಸಗಳು ಉಂಟಾಗುವುವು.  ಭಾರತದ ತೆಂಗನ್ನು ಆಯಾ ಪ್ರದೇಶಕ್ಕನುಗುಣವಾಗಿ ವಿವಿಧ ಹೆಸರಿನಲ್ಲಿ ಕರೆಯುತ್ತಾರೆ.  ಉದ್ದ ಜಾತಿಯ ತೆಂಗಿನಲ್ಲಿ ಪಶ್ಚಿಮ ಕರಾವಳಿಯ ಉದ್ದನೆಯ ಜಾತಿ ಕೇರಳದ ತ್ರಿಚೂರು ಜಿಲ್ಲೆಯಲ್ಲಿರುವ ಕಪ್ಪಡಮ್, ಲಕ್ಷದ್ವೀಪದಲ್ಲಿ  ಬೆಳೆಯುವ ಲಕ್ಷದ್ವೀಪ ಜಾತಿ. ಅಂಡಮಾನ್‍ನಲ್ಲಿ ಬೆಳೆಯುವ ಅಂಡಮಾನ್ ಜಯಂಟ್, ಕರ್ನಾಟಕ ರಾಜ್ಯದ ತಿಪಟೂರು ಉದ್ದಜಾತಿ, ಪಶ್ಚಿಮ ಕರಾವಳಿ ಉದ್ದಜಾತಿ, ಇತ್ಯಾದಿ.  ವಿದೇಶಗಳಲ್ಲಿ ಜಾವ, ನ್ಯೂಗಿನಿ, ಕೊಚಿನ್ ಚೀನ, ಫಿಲಿಪೀನ್ಸ್, ಮತ್ತು ಜಮೈಕನ್ ಬಗೆಗಳಿವೆ.  ಗಿಡ್ಡ ಜಾತಿಯಲ್ಲಿ ಕೇರಳದ ಕಿತ್ತಲೆಬಣ್ಣ ಮತ್ತು ಹಸಿರು ಬಣ್ಣದ ಚಾಫಾಟ್‍ಡ್ವಾರ್ಪ್, ಆಂಧ್ರದ ಗಂಗಾಬೊಂಡಮ್ ಇತ್ಯಾದಿಗಳು ಮುಖ್ಯವಾದವು.  ಮಲಯನ್ ಡ್ವಾರ್ಫ್, ನಯಾರ್‍ಗಡಿಂಗ್ ಮುಂತಾದವೂ ಉಂಟು.

ಉದ್ದ ಮತ್ತು ಗಿಡ್ಡ ಜಾತಿಯ ತೆಂಗುಗಳನ್ನು ಅಡ್ಡಹಾಯಿಸಿ ಪಡೆದ ತಳಿಯ ಅಲ್ಪಾವಧಿಯಲ್ಲೇ ಹೆಚ್ಚು ಫಸಲನ್ನು ಕೊಡುವುದು.
ಸಸಿ ಉತ್ಪಾದನೆ : ಒಳ್ಳೆಯ ತೋಟಗಳಲ್ಲಿ ಸುಮಾರು 25 ರಿಂದ 60 ವರ್ಷ ವಯಸ್ಸಿನ, 30 ರಿಂದ 40 ಗರಿಗಳುಳ್ಳ ಮತ್ತು ಪ್ರತಿವರ್ಷ ಸರಾಸರಿ 80 ರಿಂದ 100 ಕ್ಕೂ ಹೆಚ್ಚು ಕಾಯಿ ಕೊಡುವ ಉತ್ತಮತಳಿಯ, ಆರೋಗ್ಯವಾಗಿರುವ ತಾಯಿಮರಗಳನ್ನು ಆರಿಸಲಾಗುತ್ತದೆ.  ಈ ಮರಗಳಿಂದ ಒಳ್ಳೆಯ ಆಕಾರ ಮತ್ತು ಗಾತ್ರದ ಹಾಗೂ 12 ತಿಂಗಳು ತುಂಬಿ ಚೆನ್ನಾಗಿ ಬಲಿತ ಕಾಯಿಗಳನ್ನು ಕೊಯ್ಲುಮಾಡಿ ಹಗ್ಗದ ಮೂಲಕ ನಿಧಾನವಾಗಿ ಇಳಿಸಲಾಗುತ್ತದೆ.  ಕೊಯ್ಲು ಮಾಡಿದ ಅನಂತರ ಅದನ್ನು ಒಂದು ತಿಂಗಳವರೆಗೂ ನೆರಳಿನಲ್ಲಿ ಶೇಖರಿಸಿಡುವುದುಂಟು.  ಸ್ವಲ್ಪ ಹೆಚ್ಚು ಕಾಲ ಇಡಬೇಕದಲ್ಲಿ ನೆರಳಿರುವ ಪ್ರದೇಶದಲ್ಲಿ 8 ಛಿm ದಪ್ಪಕ್ಕೆ ಮರಳು ಹಾಕಿ ಅದರ ಮೇಲೆ ತೆಂಗಿನಕಾಯಿ ತೊಟ್ಟು ಮೇಲೆ ಮಾಡಿಟ್ಟು ನಂತರ ಮರಳು ಮುಚ್ಚಲಾಗುವುದು.  ನೆಡುವಾಗ ಬೀಜದ ಕಾಯಿಯೊಳಗೆ ನೀರು ಇರುವಂತೆ ನೋಡಿಕೊಳ್ಳಲಾಗುತ್ತದೆ.

ಉತ್ತಮ ಬೀಜದ ಕಾಯನ್ನು ಆರಿಸಿಕೊಂಡು ಮಣ್ಣು ಏರಿಸಿದ ಪಾತಿಗಳಲ್ಲಿ ಮರಳು ಮಣ್ಣು ಮಿಶ್ರಮಾಡಿ ಸುಮಾರು 1/2m. ಅಂತರದಲ್ಲಿ ತೊಟ್ಟು ಮೇಲೆ ಮಾಡಿ ಅಥವಾ ಸ್ವಲ್ಪ ಓರೆಯಾಗಿ ನೆಟ್ಟು ತೊಟ್ಟು ಕಾಣುವಂತೆ ಮರಳು ಮಿಶ್ರಿತ ಮಣ್ಣು ಮುಚ್ಚಲಾಗುವುದು.  ಅನಂತರ ಕ್ರಮವಾಗಿ ನೀರು ಕೊಡಲಾಗುತ್ತದೆ.  ಸುಮಾರು 9 - 12 ತಿಂಗಳ ಸಸಿಗಳನ್ನು ತೋಟದಲ್ಲಿ ನೆಡಲು ಆರಂಭಿಸಲಾಗುವುದು.  ಒಳ್ಳೆಯ ಗಾತ್ರದ ಕಾಂಡ ಹಾಗೂ ಆರಕ್ಕೂ ಹೆಚ್ಚು ಗರಿಗಳನ್ನುಳ್ಳ ಮತ್ತು ಜಾಗ್ರತೆ ಗರಿ ಒಡೆದ ಸಸಿಗಳನ್ನು ಆರಿಸಲಾಗುವುದು.  ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ರಿಂದ 4 ವರ್ಷ ವಯಸ್ಸಿನ ಗುಪ್ಪೆ ಸಸಿಗಳನ್ನು ನೆಡುವ ಪದ್ಧತಿಯೂ ಉಂಟು.

ತೋಟ ಮಾಡುವ ಕ್ರಮ : ತೆಂಗಿನ ತೋಟಮಾಡಲು  ಯೋಗ್ಯವಾದ ಮಣ್ಣು, ಅನುಕೂಲವಾದ ಹವಾಗುಣ ಇರುವ ಪ್ರದೇಶದಲ್ಲಿ ಭೂಮಿಯನ್ನು ಮಟ್ಟಮಾಡಿ ಹದಗೊಳಿಸಲಾಗುವುದು.  ಇಳಿಜಾರು ಭೂಮಿಯಾಗಿದ್ದರೆ ಹಂತ ಹಂತಗಳಾಗುವಂತೆ ಮಾಡಿ ಬದುಹಾಕಲಾಗುತ್ತದೆ.  ಭೂಗುಣವನ್ನನುಸರಿಸಿ ತೆಂಗಿನ ಗಿಡಗಳನ್ನು ನೆಡಲು 25 ಅಡಿಯಿಂದ (7.6m) 30 ಅಡಿ (9m) ಅಂತರದಲ್ಲಿ 3 ( 3  ( 3 (1m ( 1m ( 1m)  ಅಳತೆಯ ಗುಣಿ ತೋಡಲಾಗುವುದು.  ಸಾಮಾನ್ಯವಾಗಿ ತೆಂಗಿನ ಗಿಡಗಳನ್ನು ಚಚ್ಚೌಕ ಅಥವಾ ತ್ರಿಕೋಣ ಅಥವಾ ಹೆಡ್ಜ್‍ರೀತಿಯಲ್ಲಿ ನೆಡುವುದುಂಟು.  ತೆಂಗಿನಗಿಡಗಳನ್ನು ಒಂದೇ ಸಾಲಿನಲ್ಲಿ ಗದ್ದೆ ಅಂಚು, ಹಣ್ಣು ಹಾಗೂ ಇತರೆ ತೋಟಗಳ ಅಂಚಿನಲ್ಲಿ ನೆಡುವಾಗ 6 ರಿಂದ 7 m. ಅಂತರದಲ್ಲಿ ನೆಡಬಹುದು.  ಗಿಡ ನೆಡುವ ಮೊದಲು ಗುಣಿಗಳ ತಳಭಾಗ ಅಗೆದು ಮಣ್ಣು ಸಡಿಲಿಸಿ, ಮೇಲ್ಮಣ್ಣು, ಮರಳು ಮತ್ತು ಒಳ್ಳೆಯ ಪುಡಿಯಾದ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಸೇರಿಸಿದ ಮಿಶ್ರಣವನ್ನು ಸುಮಾರು ಒಂದೂವರೆ ಅಡಿ ವರೆಗೂ ತುಂಬುವರು.  ಗೆದ್ದಲು ಬಾರದಂತೆ ತಡೆಗಟ್ಟು 250 gm. ಹೆಪ್ಟಕ್ಲೋರ್ ಅಥವಾ ಕ್ಲೋರಿಡಿನ್ ಅಥವಾ ಬಿಎಚ್‍ಸಿ ಪುಡಿಯನ್ನು ಗುಣಿಗಳಿಗೆ ಉದುರಿಸಲಾಗುತ್ತದೆ.  ನಂತರ ಗುಣಿಮಧ್ಯದಲ್ಲಿ ತೆಂಗಿನಸಸಿ ನೆಟ್ಟು ಸುತ್ತಲೂ ಮಣ್ಣು ಭರ್ತಿಮಾಡಿ ತುಳಿದು ಗಟ್ಟಿಮಾಡಲಾಗುವುದು.  ಗಿಡದ ಬುಡದಲ್ಲಿ ಕಾಯಿ ಮುಚ್ಚುವವರೆಗೆ ಮಾತ್ರ ಮಣ್ಣು ಹಾಕಿ ಗಿಡಗಳು ಗಾಳಿಗೆ ಅಲುಗಾಡದಂತೆ ಬಿದಿರು ಅಥವಾ ಮರದ ಗೂಟ ಹುಗಿದು ಆಧಾರ ಕೊಡುವುದುಂಟು.  ಹಾಗೂ ಹುರಿಯಿಂದ ಎಂಟರ ಆಕಾರದಲ್ಲಿ ಸಡಿಲವಾಗಿ ಕಟ್ಟುವುದೂ ಉಂಟು.  ಜೌಗು ಪ್ರದೇಶದಲ್ಲಿ ಗುಣಿಯ ಆಳ ಕಡಿಮೆ ಇರುವುದು.  ಕೆಲವುಸಾರಿ ಸಮುದ್ರ ಹಾಗೂ ನದೀತೀರಗಳಲ್ಲಿ ನೀರು ನಿಂತಿರುವುದರಿಂದ ಆ ಸ್ಥಳಗಳಲ್ಲಿ ಗಿಡನೆಡುವ ಹಾಗಿದ್ದರೆ ಅಲ್ಲಿ ಮಣ್ಣಿನ ಗುಡ್ಡೆಹಾಕಿ ಏರಿಸಿ ಅದರ ಮೇಲೆ ಗಿಡಬೆಳೆಯುತ್ತ ಬಂದಹಾಗೆ ಈ ಗುಡ್ಡೆಗಳಿಗೆ ಮಣ್ಣು ಸೇರಿಸಿ ಬಲಪಡಿಸಲಾಗುವುದು.

ತೆಂಗಿನ ಗಿಡಗಳನ್ನು ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಮೇ, ಜೂನ್, ತಿಂಗಳಿನಲ್ಲೂ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲೂ, ನೀರಾವರಿ ಅನುಕೂಲವಿರುವ ಕಡೆ ಇತರೆ ಕಾಲದಲ್ಲೂ ನೆಡಬಹುದು.

ತೆಂಗು ಸುಮಾರು 80 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಎಲ್ಲ ಕಾಲದಲ್ಲೂ ಫಲ ಕೊಡುವುದರಿಂದ ಭೂಮಿಯಲ್ಲಿರುವ ನೈಟ್ರೊಜನ್, ಫಾಸ್ಫರಸ್ ಮತ್ತು ಪೊಟ್ಯಾಷ್ ಮೊದಲಾದ ಪೋಷಕಾಂಶಗಳನ್ನು ಹೀರಕೊಳ್ಳುವುದು.  ಒಂದು ಹೆಕ್ಟೇರ್ ಸ್ಥಳದಲ್ಲಿ ಬೆಳೆದ 150 ತೆಂಗಿನ ಮರಗಳು ಒಂದು ವರ್ಷದಲ್ಲಿ 56 ಞg. ನೈಟ್ರೋಜನ್ 27 ಞg. ಫಾಸ್ಫರಸ್ ಮತ್ತು 90 ಞg. ಪೊಟ್ಯಾಷನ್ನು ಮಣ್ಣಿನಿಂದ ಹೀರಿಕೊಳ್ಳುತ್ತವೆ.  ತೆಂಗಿನಮರ ಚೆನ್ನಾಗಿ ಬೆಳೆದು ಉತ್ತಮಫಲ ಕೊಡಬೇಕಾದರೆ ಕ್ರಮವಾಗಿ ಸಕಾಲದಲ್ಲಿ ಹೀಗೆ ಬರಿದಾದ ಪೋಷಕಾಂಶಗಳನ್ನು ಪುನಃ ಸೇರಿಸುವುದು ಅಗತ್ಯ.

ರಸಗೊಬ್ಬರಗಳು ಪ್ರತ್ಯೇಕವಾಗಿ ಸಿಗದಿದ್ದಲ್ಲಿ ಆಗ ರಸಗೊಬ್ಬರ 8:8:16 ರ ಪ್ರಮಾಣದ ಎನ್.ಪಿ.ಕೆ. ಮಿಶ್ರಣವನ್ನು ತೆಂಗಿನ ಮರ ಒಂದಕ್ಕೆ ಪ್ರತಿ ವರ್ಷ 5 -6 ಞg ಹಾಕಬಹುದು.  ಇದರೊಂದಿಗೆ ಪ್ರತಿ ವರ್ಷವೂ ಮರ ಒಂದಕ್ಕೆ 25 - 50 ಞg. ಕಾಂಪೋಸ್ಟ್ ಅಥವಾ ಕೊಟ್ಟಿಗೆ ಗೊಬ್ಬರ ಅಥವಾ ಹಸಿರೆಲೆ ಗೊಬ್ಬರ ಹಾಕುವುದುಂಟು.

ಚಿಕ್ಕ ಗಿಡಗಳಿಗೆ ತೋಟದಲ್ಲಿ ನೆಟ್ಟ 3 ತಿಂಗಳ ಅನಂತರ ದೊಡ್ಡಗಿಡಗಳಿಗೆ ಕೊಡುವ ಪೂರ್ತಿ ಪ್ರಮಾಣದ 1/4 ಭಾಗವನ್ನೂ, 2ನೆಯ ವರ್ಷ 3/8 ಭಾಗವನ್ನೂ, 3ನೆಯ ವರ್ಷ 1/2 ಭಾಗವನ್ನೂ, 4ನೆಯ ವರ್ಷ 3/4 ಭಾಗವನ್ನು ಮತ್ತು 5ನೆಯ ವರ್ಷದಿಂದ ಪೂರ್ತಿ ಪ್ರಮಾಣವನ್ನೂ ಕೊಡಬಹುದ.  ತೆಂಗಿನ ತೋಟದೊಳಗೆ ಸಣಬು, ಕಾಡು ಸಣಬು, ಸೆಸ್ಬೇನಿಯ, ಟೆಫ್ರೋಸಿಯ, ಕೆಲಪಗೋನಿಯಮ್‍ಮೊದಲಾದ ಹಸಿರೆಲೆ ಹಾಗೂ ಹೊದ್ದಿಕೆ (ಮುಚ್ಚು) ಬೆಳೆಗಳನ್ನು ಬೆಳೆಸಿ ಹೂ ಬಿಡುವ ಮೊದಲು ಮಣ್ಣಿನೊಳಗೆ ಸೇರಿಸುವುದರಿಂದ ಭೂಮಿ ಫಲವತ್ತಾಗುವುದು.

ಇದುವರೆಗೆ ನಡೆದಿರುವ ಸಂಶೋಧನೆಗಳ ಫಲಿತಾಂಶದ ಆಧಾರದ ಮೇಲೆ ತೆಂಗಿನ ಮರ ಒಂದಕ್ಕೆ ಕೊಡಬೇಕಾದ ಗೊಬ್ಬರದ ಪ್ರಮಾಣ ಈ ರೀತಿ ಇದೆ : 
ಪೌಷ್ಟಿಕಾಂಶ
ಪ್ರಮಾಣ
ರಸಗೊಬ್ಬರದ ಹೆಸರು
ಕೊಡಬೇಕಾದ ರಸಗೊಬ್ಬರದ ಪ್ರಮಾಣ

1 ನೈಟ್ರೊಜನ್
0.5 ಞg
ಅಮೋನಿಯಂ ಸಲ್ಫೇಟ್ ಅಥವಾ ಕ್ಯಾಲ್ಸಿಯಮ್ ಅಮೋನಿಯಮ್ ನೈಟ್ರೇಟ್ ಅಥವಾ ಯೂರಿಯ
2.5 ಞg

2.5 ಞg
1.0 ಞg

2 ಪಾಸ್ಪರಸ್
0.32 ಞg
ಸೂಪರ್ ಫಾಸ್ಫೇಟ್ ಫಾಸ್ಫೇಟ್ ಅಲ್ಟ್ರಫಾಸ್
2.0 ಞg
1.0 ಞg

3 ಪೊಟ್ಯಾಷ್
1.2 ಞg
ಮ್ಯೂರಿಯೇಟ್ ಆಫ್ ಪೊಟ್ಯಾಷ್
2.0 ಞg

ಮರದ ಬುಡದಿಂದ 2m. ಅಂತರದಲ್ಲಿ ಸುತ್ತಲೂ 0.2m. ಆಳದ ತೋಡು ಪಾತಿಮಾಡಿ ಅದರೊಳಗೆ ಮೇಲೆ ಹೇಳಿದ ಪ್ರಮಾಣದಲ್ಲಿ ಗೊಬ್ಬರವನ್ನು ಹರಡಿ ಮಣ್ಣು ಮುಚ್ಚಲಾಗುತ್ತದೆ.  ಅನಂತರ ಕ್ರಮವಾಗಿ ನೀರು ಹಾಕಲಾಗುವುದು.  ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಗೊಬ್ಬರವನ್ನು ಮುಂಗಾರು ಮಳೆಗೆ ಮೊದಲು ಮೇ, ಜೂನ್, ತಿಂಗಳಲ್ಲೂ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲೂ ಕೊಡಬಹುದು.  ನೀರಾವರಿ ಅನುಕೂಲವಿದ್ದರೆ ಗೊಬ್ಬರವನ್ನು ಎರಡು ಭಾಗ ಮಾಡಿ ವರ್ಷದಲ್ಲಿ ಎರಡುಸಾರಿ ಹಾಕುವುದುಂಟು.

ಮಧ್ಯವರ್ತಿ ಬೇಸಾಯ ಆಯಾ ಪ್ರದೇಶಗಳಿಗೆ ಅನುಗುಣವಾಗಿ ತೋಟದೊಳಗೆ ಅಗತೆ ಅಥವಾ ಉಳುಮೆಮಾಡುವುದು, ಕಳೆ ಕೀಳುವುದು, ಹೊಳಮಣ್ಣು ಸೇರಿಸುವುದು ಮತ್ತು ಕ್ರಮವಾಗಿ ನೀರು ಕೊಡುವುದು - ಇವು ತೆಂಗಿನ ತೋಟದ ಬೇಸಾಯದ ಕೆಲವು ಕಾರ್ಯಕ್ರಮಗಳು.

ತೆಂಗಿನ ತೋಟದಲ್ಲಿ ಗಿಡಗಳ ಮಧ್ಯೆ ರಾಗಿ, ಜೋಳ, ಕಬ್ಬು, ಹುರುಳಿ, ನೆಲಗಡಲೆ, ಹಿಪ್ಪನೇರಳೆ, ಅನನಾಸ್, ಮರಗೆಣಸು, ಸುವರ್ಣಗೆಡ್ಡೆ, ಅರಶಿನ ಶುಂಠಿ, ತರಕಾರಿ ಮೊದಲಾದ ಉಪಬೆಳೆಗಳನ್ನೂ ಬೆಳೆಯುವುದುಂಟು.  ಆದರೆ ತೆಂಗಿನ ಮರ ಬೆಳೆದು ಫಲಕೊಡಲು ಪ್ರಾರಂಭಿಸಿದ ಅನಂತರ ಉಪಬೆಳೆಗಳನ್ನು ಕಡಿಮೆಮಾಡಲಾಗುತ್ತದೆ.

ತೆಂಗಿನ ಗಿಡಕ್ಕೆ ಬರುವ ರೋಗಗಳು, ಸುಳಿಕೊಲವೆರೋಗ : ಫೈಟಾಫ್ತರ ಪಾಮಿವೊರ ಎಂಬ ಶಿಲೀಂಧ್ರದಿಂದ ಈ ರೋಗ ಉಂಟಾಗುವುದು.  ತೆಂಗಿನಸುಳಿ ಕೊಳೆಯಲು ಪ್ರಾರಂಭಿಸಿ ಕ್ರಮೇಣ ಮರ ಸಾಯುವುದು.  ಇದರ ಚಿಹ್ನೆ ಕಂಡ ಕೂಡಲೆ ರೋಗ ತಗಲಿದ ಭಾಗವನ್ನು ಶುಚಿಮಾಡಿ 1% ಬೋರ್ಡೊ ದ್ರಾವಣವನ್ನು ಸುಳಿ ಮತ್ತು ಗರಿಗಳಿಗೆ ಸಿಂಪಡಿಸುವುದರಿಂದ ಇದನ್ನು ನಿಯಂತ್ರಿಸಬಹುದು.  ರೋಗಹರಡದಂತೆ ಸುತ್ತಲೂ ಇರವ ಮರಗಳಿಗೆ ಸಹ ಈ ಔಷಧಿ ಸಿಂಪಡಿಸಲಾಗುತ್ತದೆ.
ಕಾಂಡ ಸೋರುವುದು : ತೆಂಗಿನ ಮರದ ಕಾಂಡದಲ್ಲಿ ಬಿರುಕುಗಳಿಂದ ಕಂದು ಬಣ್ಣದ ರಸ ಇಳಿಯುವುದು.  ಸಿರೆಸ್ಟೊಮೆಲ್ಲ ಪ್ಯಾರಡಾಕ್ಸ ಎಂಬ ಶಿಲೀಂಧ್ರದಿಂದ ಈ ರೋಗ ಬರುವುದು.  ಹರಿತವಾದ ಉಳಿಯಿಂದ ಅಥವಾ ಕತ್ತಿಯಿಂದ ರೋಗ ಪೀಡಿತ ಭಾಗಗಳನ್ನೆಲ್ಲ ಕೆತ್ತಿ ತೆಗೆದು ಈ ಭಾಗಕ್ಕೆ ಟಾರು ಅಥವಾ ಬೋರ್ಡೊ ಮುಲಾಮನ್ನು ಬಳಿಯುವುದರಿಂದ ಈ ರೋಗವನ್ನು ನಿವಾರಿಸಬಹುದು.

ಅಣಬೆ ರೋಗ : ಗ್ಯಾನೊಡರ್ಮ ಲೂಸಿಡಮ್ ಎಂಬ ಶಿಲೀಂಧ್ರದಿಂದ ಈ ರೋಗ ಬರುವುದು. ಕಾಂಡದ ಬುಡದಲ್ಲಿ ಕಂದುಬಣ್ಣದ ರಸಬಂದು ಕ್ರಮೇಣ ಅಣಬೆಕಟ್ಟುವುದು ; ತೆಂಗಿನಗರಿಗಳೆಲ್ಲ ಬಾಡಿ ಜೋಲಾಡುವುದು ; ತಲೆ, ಸುಳಿ ಕಿರಿದಾಗಿ ಫಸಲು ಕಡಿಮೆಯಾಗುತ್ತ ಬರುವುದು  - ಇವು ರೋಗಲಕ್ಷಣಗಳು.  ಕ್ರಮೇಣ ಮರ ಸತ್ತುಹೋಗುತ್ತದೆ.  ಇದು ಅಂಟುರೋಗ.  ರೋಗ ತಗುಲಿದ ಮರವನ್ನು ಬೇರುಸಮೇತ ತೆಗೆದುಹಾಕುವುದಲ್ಲದೆ ತೆಂಗಿನ ಮರದ ಸುತ್ತಲೂ 11/2 ಞg. ಗಂಧಕದ ಪುಡಿಯನ್ನು ಸೇರಿಸಿ ಕ್ರಮವಾಗಿ ಬೇಸಾಯಮಾಡುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು.

ಇವುಗಳಲ್ಲದೆ ಬೇರುಕೊಳೆವ ರೋಗ ಎಲೆ ಚುಕ್ಕೆರೋಗ, ಎಲೆ ಕೊಳೆತ ರೋಗ ಮೊದಲಾದವು ಕೇರಳದಲ್ಲಿ ಹೆಚ್ಚಾಗಿವೆ.
ಕೀಟಗಳು : ದುಂಬಿ : ರೈನಾಸಿರಸ್ ಎಂಬ ದುಂಬಿ ತೆಂಗಿನ ಮರದ ಸುಳಿಯನ್ನು ಕೊರೆದು ಹಾನಿಮಾಡುವುದು.  ಇದು ಉತ್ಪನ್ನವಾಗುವ ಸ್ಥಳಗಳಾದ ಗೊಬ್ಬರದ ಗುಂಡಿ, ಕೊಳೆತ ಪದಾರ್ಥ, ಕಸ, ಕಡ್ಡಿ ಹಾಕುವ ಸ್ಥಳಗಳಿಗೆ ಬಿಎಚ್‍ಸಿ ಮೊದಲಾದ ಕೀಟನಿರೋಧಕಗಳನ್ನು ಸಿಂಪಡಿಸಿ ಇದನ್ನು ತಡೆಗಟ್ಟಬಹುದು.  ಕಬ್ಬಿಣದ ಕೊಕ್ಕೆಯ ಸಹಾಯದಿಂದ ಸುಳಿಯೊಳಗೆ ಸೇರಿಕೊಂಡಿರುವ ದುಂಬಿಗಳನ್ನು ಹೊರತೆಗೆಯಬಹುದು.  5% ಬಿಎಚ್‍ಸಿ ಪುಡಿ ಮತ್ತು ಮರಳು ಮಿಶ್ರಣ ಮಾಡಿ ಸುಳಿ,  ಹಾಗೂ ಗರಿಗಳ ಬುಡದ ಸಂದುಗಳಲ್ಲಿ ತುಂಬುವುದರಿಂದಲೂ ಈ ಕೀಟವನ್ನು ನಿಯಂತ್ರಿಸಬಹುದು.

ತೆಂಗಿನಗರಿ ತಿನ್ನುವ ಕಂಬಳಿಹುಳು : ನೆಫಂಟಿಸ್ ಸೆರಿನೋಪ ಕೀಟದ ಕಂಬಳಿ ಹುಳು ಎಲೆಯ ಹಸಿರು ಪದಾರ್ಥವನ್ನು ತಿನ್ನುವುದು, ಅನಂತರ ಸೋಗೆ ಒಣಗಿ ಗುಳಿಗೆ ಪುಡಿಯಾಗಿ ಉದುರಿ ಹೋಗಿ ಗರಿಗಳಲ್ಲಿ ಬರಿಯ ಕಡ್ಡಿ ಮಾತ್ರ ಉಳಿದಿರುವುದು.  0.2% ಡಿಡಿಟಿ ಅಥವಾ ಬಿಎಚ್‍ಸಿ ಅಥವಾ 0.05% ಮೆಲಾತಿಯಾನ್ ಸಿಂಪಡಿಸುವುದರಿಂದ ಇದನ್ನು ಹತೋಟಿಗೆ ತರಬಹುದು.  ಜೈವಿಕ ನಿಯಂತ್ರಣವೂ (ಬಯಲಾಜಿಕಲ್ ಕಂಟ್ರೋಲ್) ಸಾಧ್ಯವೆಂದು ತಿಳಿದುಬಂದಿದೆ.

ರೆಡ್ ಪಾಮ್ ವೀವಿಲ್ : ತೆಂಗಿನ ಮರದಲ್ಲಿ ಏನಾದರೂ ರಂಧ್ರಗಳಿದ್ದರೆ ಅದರ ಮೂಲಕ ವೀವಿಲ್ ಕೀಟಗಳು ಮರದ ಒಳಗೆ ಮೃದುವಾದ ಭಾಗವನ್ನೂ ತಿನ್ನುತ್ತ ಮರದ ತುದಿಯ ವರೆಗೂ ಹೋಗುವುವು.  ಜಗಿಯಲ್ಪಟ್ಟ ನಾರಿನ ಪುಡಿ ಮತ್ತು ಕಂದುಬಣ್ಣದ ರಸ ಹೊರಬರುತ್ತವೆ.  ಮರ ಒಣಗಿ ಸಾಯುವುದು.  1.0% ಪೈರೊಕೋನ್ ಅಥವಾ ಕಾರ್‍ಬೈಲ್‍ನ್ನು ತೂತುಗಳ ಮೂಲಕ ಚುಚ್ಚಿ ಹೊಗಿಸುವುದರಿಂದ ಇದನ್ನು ನಿವಾರಿಸಬಹುದು.  ಹೀಗೆ ಸೂಜಿಮದ್ದು ಕೊಡುವ ತೂತನ್ನು ಬಿಟ್ಟು ಉಳಿದ ತೂತುಗಳನ್ನು ಮೊದಲೇ ಮುಚ್ಚಿದ್ದು ಅನಂತರ  ಸೂಜಿಮದ್ದು ಕೊಟ್ಟ ತೂತನ್ನು ಸಹ ಮುಚ್ಚಲಾಗುವುದು.

ಬೇರು ಹುಳು : ಕಾಕ್‍ಚಾಫರ್ ಎಂಬ ಬಿಳಿಯ ಗೊಣ್ಣೆಹುಳು ಭೂಮಿಯೊಳಗೆ ಸೇರಿಕೊಂಡು ತೆಂಗಿನ ಬೇರುಗಳನ್ನು ತಿಂದು ನಾಶಪಡಿಸುತ್ತದೆ.  5.0% ಬಿಎಚ್‍ಸಿ, ಆಲ್ಡ್ರಿನ್ ಅಥವಾ ಕ್ಲೋರೆಡೆನ್ ಪುಡಿಯನ್ನು ಮರದ ಸುತ್ತ ಭೂಮಿಯೊಳಗೆ ಸೇರಿಸುವುದರಿಂದ ಇದನ್ನು ಹತೋಟಿಗೆ ತರಬಹುದು.

ತೆಂಗಿನ ವಿವಿಧ ಸಮಸ್ಯೆಗಳ ಬಗ್ಗೆ ಸಂಶೋಧನೆಗಳನ್ನು ಕೇರಳ ರಾಜ್ಯದಲ್ಲಿರುವ ತೋಟದ ಬೆಳೆಗಳ ಸಂಶೋಧನ ಕೇಂದ್ರ, ಕಾಸರಗೋಡು ಮತ್ತು ಕಾಯಂಗುಲಮ್ ನಲ್ಲೂ ಕರ್ನಾಟಕ ರಾಜ್ಯದ ಅರಸೀಕೆರೆಯಲ್ಲೂ ನಡೆಸಲಾಗುತ್ತಿದೆ.  ಕರ್ನಾಟಕ ರಾಜ್ಯದ ತೋಟದ ಇಲಾಖೆಯು ಸಸಿಕ್ಷೇತ್ರಗಳಲ್ಲಿ ಉತ್ತಮ ಸಸಿಗಳನ್ನು ಬೆಳೆಸಿ ರೈತರಿಗೆ ಹಂಚುವುದರೊಂದಿಗೆ ತೆಂಗಿವ ವ್ಯವಸಾಯದ ಬಗ್ಗೆ ತಾಂತ್ರಿಕ ಸಲಹೆ ಕೊಡುತ್ತದೆ.
(ಕೆ.ಟಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ